ಬೆಂಗಳೂರು- ರಾಜ್ಯದಾದ್ಯಂತ ಸಾರಿಗೆ ನೌಕರರ ಮುಷ್ಕರದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಇವರ ಪ್ರತಿಭಟನೆ ಯಾವಾಗ ಮುಗಿಯುತ್ತೆ ಅಂತ ಸಾರ್ವಜನಿಕರು ಕಾಯ್ತಿದ್ದಾರೆ. ಸರ್ಕಾರ ಬದಲಿ ವ್ಯವಸ್ಥೆ ಮಾಡುವುದಕ್ಕೆ ಮುಂದಾದ ಬೆನ್ನಲ್ಲೇ ಸಾರಿಗೆ ನೌಕರರ ಮುಖ್ಯಸ್ಥರು ಮಾತುಕತೆಗೆ ಮುಂದಾಗಿದ್ದು, ಸಭೆಯಲ್ಲಿ ಏನು ನಡೆಯುತ್ತೆ ಅನ್ನುವುದು ಕುತೂಹಲ ಕೆರಳಿಸಿದೆ.
ಸಾರಿಗೆ ನೌಕರರಿಗೆ ಸಿಗಲಿದ್ಯಂತೆ ಬಂಪರ್ ಗಿಫ್ಟ್?
ದೊಡ್ಡ ಬೇಡಿಕೆ ಹೊರತುಪಡಿಸಿ ಉಳಿದ ಬೇಡಿಕೆ ಈಡೇರಿಸಲು ಪ್ಲಾನ್!
ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಮನಸ್ಸು ಮಾಡಿದೆ. 2020ರಲ್ಲಿ ಹೆಚ್ಚಾದ ವೇತನವನ್ನು ಪಾವತಿಸುವ ಬಗ್ಗೆಯೂ ಸಕಾರಾತ್ಮಕ ಮಾತುಕತೆ ನಡೆಸುತ್ತಿದೆ. ಜೊತೆಗೆ ಕರೊನಾದಿಂದ ವಿಧಿವಶರಾದ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ನೀಡುವ ಬೇಡಿಕೆಗೂ ಜೈ ಹೇಳುವ ಸಾಧ್ಯತೆಯಿದೆ. ಸರ್ಕಾರಿ ನೌಕರರಿಗೆ ಆಗುತ್ತಿರುವ ಕಿರುಕುಳ ಬಗ್ಗೆ ತನಿಖೆ ಮತ್ತು ರಜೆಯ ಗೊಂದಲ ನಿವಾರಿಸಲು ಕೂಡ ಸರ್ಕಾರ ಒಪ್ಪಿಗೆ ಸೂಚಿಸಲು ಮುಂದಾಗುವ ಸಾಧ್ಯತೆ
ಸರ್ಕಾರಿ ನೌಕರರನ್ನಾಗಿಸುವ ಬೇಡಿಕೆಗಿಲ್ಲ ಅಸ್ತು!
ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ ಸರ್ಕಾರಿ ನೌಕರರನ್ನಾಗಿಸುವ ಬೇಡಿಕೆಗೆ ಸರ್ಕಾರ ಒಪ್ಪುತ್ತಿಲ್ಲ. ಇದು ಸರ್ಕಾರ ಬೊಕ್ಕಸಕ್ಕೆ ಹೊರೆಯಾಗುತ್ತೆ. ಅಲ್ಲದೇ ಒಂದು ಅಂದಾಜಿನ ಪ್ರಕಾರ ಒಂದು ತಿಂಗಳ ಖರ್ಚು ಈಗ ಅಂದಾಜು 400 ಕೋಟಿಯಷ್ಟಾದ್ರೆ, ಸರ್ಕಾರಿ ನೌಕರರನ್ನಾಗಿ ಮಾಡಿದ್ರೆ 3000 ಕೋಟಿಗೂ ಅಧಿಕ ಹಣ ಬೇಕಾಗುತ್ತೆ. ಆದ್ದರಿಂದ ಈ ಹೈ ರಿಸ್ಕ್ ತೆಗೆದುಕೊಳ್ಳಲು ಸರ್ಕಾರ ಮುಂದಾಗಲಾರದು.
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ರಾ ಕೋಡಿಹಳ್ಳಿ?
ರೈತ ಮುಖಂಡನಿಗೂ ಸಾರಿಗೆ ನೌಕರರಿಗೂ ಸಂಬಂಧವೇನು?
ಕೋಡಿಹಳ್ಳಿಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಈಡಾಗ್ತಾರಾ ಮುಖಂಡರು?
ರೈತರ ಚಳುವಳಿಯನ್ನು ನಡೆಸಲು ಮುಂದಾದ ಕೋಡಿಹಳ್ಳಿ ಚಂದ್ರಶೇಖರ್, ಆ ಹೋರಾಟದಲ್ಲಿ ಗೆಲುವು ಸಾಧಿಸಲಾಗಲಿಲ್ಲ. ಭಾರತ್ ಬಂದ್ ಮಾಡುವ ಉದ್ದೇಶದಿಂದ ಆರಂಭವಾದ ಪ್ರತಿಭಟನೆ ,ಮುಷ್ಕರ ಕರ್ನಾಟಕದಲ್ಲಿ ಬೆಂಬಲ ಸಿಗದೇ ಠುಸ್ ಪಟಾಕಿಯಾಯ್ತು. ಇದೇ ವೇಳೆ ಸಾರಿಗೆ ನೌಕರರ ಹೋರಾಟ ಆರಂಭವಾಯ್ತು, ಕೋಡಿಹಳ್ಳಿ ಅವರೊಂದಿಗೆ ಸೇರಿಕೊಂಡು ಘೋಷಣೆ ಕೂಗಿದ್ರು, ಏಕಾಏಕಿ ಬಸ್ ಮಾರ್ಗಮಧ್ಯೆ ನಿಲ್ತು, ಸಾರಿಗೆ ನೌಕರರು ಪ್ರತಿಭಟನೆಗಿಳಿದ್ರು. ಇದು ಅಚ್ಚರಿಗೂ ಕಾರಣವಾಯ್ತು.
ಯೂನಿಯನ್ ಲೀಡರ್ ಗಳಿಂದ ಕೋಡಿಹಳ್ಳಿ ಎಂಟ್ರಿ ಬಗ್ಗೆ ಅಸಮಾಧಾನ
ಕೋಡಿಹಳ್ಳಿ ಚಂದ್ರಶೇಖರ್ ಗೂ ಸಾರಿಗೆ ನೌಕರರಿಗೂ ಸಂಬಂಧಗಳೇ ಇಲ್ಲ. ಹೀಗಿರುವಾಗ ಅವರ ಮಾತು ಕೇಳಿ ನೌಕರರು ಬಂದ್ ಗೆ ಮುಂದಾಗಿದ್ದು, ಯೂನಿಯನ್ ಲೀಡರ್ಸ್ ಗೆ ಇರಿಸುಮುರಿಸು ಉಂಟು ಮಾಡ್ತು. ಸರ್ಕಾರ ಸಾರಿಗೆ ನೌಕರರ ಮುಖಂಡರನ್ನು ಮಾತನಾಡಿಸಲು ಮುಂದಾಯ್ತಾದ್ರೂ, ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮಾತಾಡಲು ಮುಂದಾಗಲಿಲ್ಲ. ಆದ್ದರಿಂದ ಚಂದ್ರಶೇಖರ್ ಮತ್ತಷ್ಟು ಮುಖಭಂಗ ಅನುಭವಿಸಬೇಕಾಯ್ತು.
ಹೀಗಿರುವಾಗಲೇ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಾರಿಗೆ ನೌಕರರು ತಮ್ಮ ಸಂಘದ ಗೌರವಾಧ್ಯಕ್ಷರನ್ನಾಗಿ ನೇಮಿಸಿದ್ದೇವೆ ಅಂತ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ಯೂನಿಯನ್ ಲೀಡರ್ಸ್, ಸಾರಿಗೆ ನೌಕರರ ಹೋರಾಟದ ಬಗ್ಗೆ ಕೋಡಿಹಳ್ಳಿಗೆ ಏನು ಗೊತ್ತು, ಅವರು ಇಷ್ಟು ದಿವಸ ಎಲ್ಲಿದ್ರು, ನೋಟಿಸ್ ಕೊಡದೇ ಬಂದ್ ಮಾಡುವ ಸಂಸ್ಕೃತಿ ಎಲ್ಲಿತ್ತು ಅಂತ ಪ್ರಶ್ಸಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗ ಎಡೆಬಿಡದೇ ಮಾತುಕತೆ ನಡೆಯುತ್ತಿದ್ದು, ಸಚಿವರೊಂದಿಗಿನ ಸಾರಿಗೆ ನೌಕರರ ಸಂಘದ ಮುಖಂಡರು, ಯೂನಿಯನ್ ಲೀಡರ್ಸ್ ಮಾತುಕತೆ ನಡೆಸುತ್ತಿದ್ದಾರೆ. ಈ ಮಾತುಕತೆ ಫಲಪ್ರದವಾಗುತ್ತಾ, ಇಲ್ಲ ನಾಳೆಯೂ ಮುಷ್ಕರ ಮುಂದುವರೆಯುತ್ತಾ ಕಾದು ನೋಡ್ಬೇಕು.