ಮುಂಬೈ-ಭಾರತದಲ್ಲಿ ಕೊರೊನಾ ತಾಂಡವವಾಡುತ್ತಿರುವುದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸುವುದಕ್ಕೆ ಬಿಸಿಸಿಐ ಎಲ್ಲಾ ತಯಾರಿ ಮಾಡಿಕೊಂಡಿದೆ. ಟಿ ಟ್ವೆಂಟಿ ವಿಶ್ವಕಪ್ ಮುಂದೂಡಲ್ಪಟ್ಟಿರುವ ಹಿನ್ನಲೆಯಲ್ಲಿ ಐಪಿಎಲ್ ಗೆ ಯಾವುದೇ ಅಡೆತಡೆಗಳು ಇಲ್ಲವಾಗಿದೆ.

ಸೆಪ್ಟೆಂಬರ್ 19ಕ್ಕೆ ಐಪಿಎಲ್ ಆರಂಭ?
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಮೊದಲ ಪಂದ್ಯ ಯಾವಾಗ ನಡೆಯುತ್ತೆ ಅನ್ನೋ ಕುತೂಹಲಕ್ಕೆ ಸೆಪ್ಟೆಂಬರ್ 19 ಅನ್ನುವ ಉತ್ತರ ಸಿಕ್ಕಿದೆ. ದುಬೈನಲ್ಲಿ ನಡೆಯಲಿರುವ ಟೂರ್ನಿ 51 ದಿನಗಳ ಕಾಲ ನಡೆಯಲಿದೆ. ನವೆಂಬರ್ 8ಕ್ಕೆ ಫೈನಲ್ ಪಂದ್ಯ ನಡೆಸಲು ಪ್ಲಾನ್ ಮಾಡಲಾಗಿದೆ.
ಫ್ರಾಂಚೈಸಿಗಳಿಗೆ ಮಾಹಿತಿ ರವಾನೆ?
ಐಪಿಎಲ್ ನ ಫ್ರಾಂಚೈಸಿಗಳಿಗೆ ಈಗಾಗ್ಲೇ ಸಪ್ಟೆಂಬರ್ 19 ರಿಂದ ನವೆಂಬರ್ 8ರವರೆಗೆ ಪಂದ್ಯಗಳು ಅನ್ನುವ ಮಾಹಿತಿ ರವಾನೆಯಾಗಿದೆ ಎನ್ನಲಾಗಿದೆ. ಈ ಮೂಲಕ ಈ ಹಿಂದಿನ ಮಾದರಿಯಲ್ಲೇ ಟೂರ್ನಿ ನಡೆಯುವ ಸಾಧ್ಯತೆಯಿದ್ದು, ಪಂದ್ಯಗಳನ್ನು ಕಡಿತಗೊಳಿಸುವ ಸಾಧ್ಯತೆಗಳಿಲ್ಲ. ಅಲ್ಲದೇ, ವೀಕೆಂಡ್ ಜೊತೆಗೆ ವಾರದ ಕೆಲ ದಿನಗಳಲ್ಲೂ ಕೂಡ ಡಬಲ್ ಹೆಡ್ಡರ್ ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ.

ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಪಂದ್ಯ
ಕೊರೊನಾದ ಹಾವಳಿಯಿಂದಾಗಿ ದುಬೈನಲ್ಲಿ ಪ್ರೇಕ್ಷಕರಿಲ್ಲದ ಮೈದಾನದಲ್ಲೇ ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಯಾವ ಯಾವ ತಂಡಗಳಿಗೆ ಮೊದಲ ಪಂದ್ಯ ನಡೆಯಲಿದೆ ಅನ್ನೋದರ ಸಂಪೂರ್ಣ ವಿವರ ಮುಂದಿನ ಐದು ದಿನಗಳ ಒಳಗೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಪ್ರಕಟಿಸುವ ಸಾಧ್ಯತೆಯಿದೆ.