ಬೆಂಗಳೂರು: ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ಬಹಳ ಆಳವಾಗಿ ಬೇರೂರಿದೆ ಅನ್ನೋದು ಸಿಸಿಬಿಯ ಮೆಗಾ ಆಪರೇಷನ್‌ನಿಂದ ಬಯಲಾಗಿತ್ತು. ಈಗ ಈ ಡ್ರಗ್ಸ್ ಮಾರಾಟದಲ್ಲಿ ಸ್ಯಾಂಡಲ್ ವುಡ್‌ನ ನಟ ನಟಿಯರ ಲಿಂಕ್ ಇದೆ. ನಟ ನಟಿಯರಿಗೆ ಡ್ರಗ್ಸ್ ಸಪ್ಲೈ ಆಗ್ತಿದೆ ಅನ್ನುವ ಸುದ್ದಿಗಳ ನಡುವೆಯೇ, ನಿರ್ದೇಶಕ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಕರ್ನಾಟಕವೇ ಆಘಾತಕ್ಕೊಳಗಾಗುವ ಮಾತುಗಳನ್ನಾಡಿದ್ದಾರೆ.
ಹಿರಿಯ ನಟರ ಪುತ್ರರಿಗೂ ಇದ್ಯಾ ಡ್ರಗ್ಸ್ ಲಿಂಕ್ ?
ರಾಜ್ಯದ ಟಿವಿ ವಾಹಿನಿಗಳಿಗೆ ಇಂದ್ರಜಿತ್ ಲಂಕೇಶ್ ಮಾತನಾಡುತ್ತಾ, ಈ ಡ್ರಗ್ಸ್ ಮಾಫಿಯಾ ಅನ್ನೋದು ಸ್ಯಾಂಡಲ್‌ವುಡ್ ನ ಮೂರನೇ ತಲೆಮಾರಿನಲ್ಲಿ ಬೇರೂರಿದೆ. ಮೂರನೇ ತಲೆಮಾರಿನ ಹಲವಾರು ನಟ ನಟಿಯರು ಡ್ರಗ್ಸ್‌ನ ದಾಸರಾಗಿದ್ದಾರೆ. ಇದರಲ್ಲಿ ರಾಜ್ಯದ ಹಿರಿಯ ನಟರ ಮಕ್ಕಳೂ ಇದ್ದಾರೆ ಅನ್ನುವ ಮಾತು ಹೇಳಿರುವ ಇಂದ್ರಜಿತ್ ಅಚ್ಚರಿ ಮೂಡಿಸಿದ್ದಾರೆ.
ನಿರ್ಮಾಪಕರನ್ನು ಸೆಳೆಯುವುದಕ್ಕೆ ಡ್ರಗ್ಸ್ !
ಯುವ ನಟ ನಟಿಯರು ತಮ್ಮ ಸಿನಿಮಾಗಳಿಗೆ ನಿರ್ಮಾಪಕರನ್ನು ಸೆಳೆಯಲು ಪಾರ್ಟಿ ಆಯೋಜಿಸುತ್ತಾರೆ. ಈ ಮೂಲಕ ಡ್ರಗ್ಸ್‌ನ ವಾಸನೆಯಿಂದಲೇ ನಿರ್ಮಾಪಕರು ಖುಷಿಯಾಗುತ್ತಾರೆ ಅನ್ನೋ ಪರೋಕ್ಷ ಆರೋಪವೂ ಕೇಳಿಬರುತ್ತಿದೆ. ಇದು ಹೌದು ಅನ್ನೋದೇ ಆದರೆ ಚಂದನವನದಲ್ಲೂ ಕೂಡ ಮಾದಕ ವಸ್ತುಗಳು ತನ್ನ ಕಬಂಧಬಾಹುವನ್ನು ಎಷ್ಟರಮಟ್ಟಿಗೆ ವಿಸ್ತರಿಸಿವೆ ಅನ್ನುದು ಗೊತ್ತಾಗುತ್ತದೆ.
ರಾಜಕಾರಣಿಗಳ ಮಕ್ಕಳು ಇರುವುದರಿಂದ ಎಲ್ಲರೂ ಸೇಫ್!?
ಸಿನಿಮಾ ನಟ ನಟಿಯರ ಜೊತೆ ಜೊತೆಗೆ ರಾಜಕಾರಣಿಗಳ ಮಕ್ಕಳು ಕೂಡ ಇದರಲ್ಲಿ ಭಾಗಿಯಾಗಿರುತ್ತಾರೆ. ಇದರಿಂದಲೇ ಎಷ್ಟೇ ಮಾದಕ ವಸ್ತುಗಳು ಸಿಕ್ಕರೂ ಕೂಡ ಆ ಕೇಸ್‌ಗಳು ಮುನ್ನಡೆ ಸಾಧಿಸದೇ ಬೀಳುತ್ತಿವೆಯಾ ಅನ್ನೋ ಅನುಮಾನ ಬರುತ್ತಿದೆ.
ಅಪಘಾತ,ಸಾವುಗಳಿಗೆ ಡ್ರಗ್ಸ್ ಕಾರಣನಾ?
ಸ್ಯಾಂಡಲ್‌ವುಡ್ ನಟ ನಟಿಯರ ಲಿಂಕ್ ಅಂತ ಹೇಳುವ ಜೊತೆ ಜೊತೆಗೆ ಇತ್ತೀಚೆಗೆ ನಡೆದ ಕೆಲವು ಅಪಘಾತಗಳು, ಲೇಟ್ ನೈಟ್ ಪಾರ್ಟಿ, ಗಲಾಟೆ, ಸಾವು ನೋವುಗಳೆಲ್ಲದರ ಬಗ್ಗೆಯೂ ಅನುಮಾನಗಳು ಮೂಡುತ್ತಿವೆ. ಈ ಬಗ್ಗೆಯೂ ಕೂಡ ಸೂಕ್ತ ತನಿಖೆಯಾಗಲೇಬೇಕು.
ಹೆಸರು ಬಹಿರಂಗ ಪಡಿಸಲು ಆಗ್ರಹ
ಮಾಡೆಲ್,ನಟ,ನಟಿ, ರಾಜಕಾರಣಿಗಳ ಹೆಸರು ಹೇಳಿ
ಕೇವಲ ಯುವ ನಟರು, ಮೂರನೇ ಪೀಳಿಗೆ, ಹಿರಿಯ ನಟರ ಮಕ್ಕಳು ,ರಾಜಕಾರಣಿಗಳ ಮಕ್ಕಳ ಹೆಸರನ್ನು ಇಂದ್ರಜಿತ್ ಬಹಿರಂಗಪಡಿಸಲೇಬೇಕಿದೆ. ಇಲ್ಲವಾದರೇ, ಇನ್ನೊಂದುವಾರದಲ್ಲೇ ಈ ಡ್ರಗ್ಸ್ ಸುದ್ದಿ ಮಾಯವಾಗುತ್ತೆ. ಎಲ್ಲರೂ ಮೌನವಾಗುತ್ತಾರೆ. ಮತ್ತೆ ಆ ಪೆಡ್ಲರ್‌ಗಳು, ವ್ಯಸನಿಗಳು ಮತ್ತಿನ ಸುಪ್ಪತಿಗೆಯಲ್ಲಿ ತೇಲುತ್ತಾರೆ. ಮತ್ತೊಂದಷ್ಟು ಸಾವು ನೋವು ಅಪಘಾತಗಳು ಸಂಭವಿಸಿದಾಗ ಮತ್ತೆ ಒಂದಷ್ಟು ದಿನ ಸುದ್ದಿಯಾಗುತ್ತೆ. ಇದು ಇಷ್ಟಕ್ಕೆ ನಿಲ್ಲಲೇಬಾರದು.
ಪೊಲೀಸ್ ಕಮೀಷನರ್ ಹೆಸರು ಹೇಳಿ
ಇತ್ತೀಚೆಗೆ ಬೆಂಗಳೂರಿನ ಪೊಲೀಸ್ ಕಮಿಷನರ್ ಕೆಲ ನಟಿಯರು ಹನಿ ಟ್ರ್ಯಾಪ್‌ನಲ್ಲಿ ತೊಡಗಿದ್ದಾರೆ ಅನ್ನುವುದನ್ನು ತಿಳಿಸಿದ್ದರು. ಆದರೆ ಅವರು ಯಾರು ಅನ್ನುವುದನ್ನು ಬಹಿರಂಗಪಡಿಸಿಲ್ಲ.
ಸ್ಯಾಂಡಲ್‌ವುಡ್ ಸ್ಕ್ಯಾಂಡಲ್‌ವುಡ್ ಆಗದಿರಲಿ
ಕರುನಾಡಿನ ಚಂದನವನ ಅಂದ್ರೆ ಅದಕ್ಕೆ ಡಾ.ರಾಜ್‌ಕುಮಾರ್ ಅವರಿಂದ ಮೊದಲ್ಗೊಂಡು ಇಲ್ಲಿಯವರೆಗೆ ಹಿರಿಯರು ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ಅಂದ್ರೆ ಭಾರತದಲ್ಲಿ ಒಂದು ಹೆಗ್ಗಳಿಗೆ, ಘನತೆ, ಮರ್ಯಾದೆ ಎಲ್ಲವೂ ಇತ್ತು. ಆದರೆ, ಇದು ಹಾಳಾಗದಿರಲಿ, ಸ್ಯಾಂಡಲ್ ವುಡ್ ಸ್ಕ್ಯಾಂಡಲ್ ವುಡ್ ಆಗದಿರಲಿ.