ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ಹಾವಳಿ ಹೆಚ್ಚಾಗುತ್ತಿದೆ. ಈ ನಡುವೆ ಸರ್ಕಾರ ಬೆಂಗಳೂರಿನಲ್ಲಿ ಬೆಡ್ ಗಾಗಿ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ ಸರ್ಕಾರ ಅಂದುಕೊಂಡಂತೆ ಬೆಡ್ ಗಳು ಮಾತ್ರ ಖಾಸಗಿ ಆಸ್ಪತ್ರೆಗಳಿಂದ ಸಿಗುತ್ತಿಲ್ಲ. ಇದರಿಂದ ಬೇಸತ್ತಿರುವ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ರದ್ದುಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಡಿಸಿಎಂರಿಂದ ಸಿಎಂಗೆ ಪರವಾನಗಿ ರದ್ದುಗೊಳಿಸಲು ಮನವಿ
ಕೋವಿಡ್ 19 ಸೋಂಕಿತರಿಗಾಗಿ ಸರ್ಕಾರಕ್ಕೆ ತಮ್ಮಲ್ಲಿರುವ 50 ಶೇಕಡಾದಷ್ಟು ಹಾಸಿಗೆಯನ್ನು ಸರ್ಕಾರಕ್ಕೆ ನೀಡುವುದಾಗಿ ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ಪದಾದಿಕಾರಿಗಳು ಒಪ್ಪಿಕೊಂಡಿದ್ದರು. ಆದರೆ ಇದನ್ನು ಖಾಸಗಿಯವರು ಮಾಡುತ್ತಿಲ್ಲ. ಹೀಗೆ ಹಾಸಿಗೆ ನೀಡುವಲ್ಲಿ ಮೀನಾಮೇಷ ಎಣಿಸುವ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸಬೇಕೆಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಸಿಎಂ ಬಿ ಎಸ್ ಯಡಿಯೂರಪ್ಪಗೆ ಸಲಹೆ ನೀಡಿದ್ದಾರೆ.
ಸರ್ಕಾರಕ್ಕೆ ಸೂಕ್ತ ಸಂದರ್ಭದಲ್ಲಿ ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳು ಹಸ್ತಾಂತರಿಸಬೇಕಿತ್ತು. ಅವರು ಹಸ್ತಾಂತರಿಸದೇ ಇರುವುದರಿಂದಲೇ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯವೂ ಮಾತುಕತೆಯ ವೇಳೆ ಬಂದಿದೆ ಎನ್ನಲಾಗಿದೆ.