ಚೆನ್ನೈ: ಸಂಗೀತ ಸಾಮ್ರಾಟ, ಸ್ವರ ರಾಗ ಚಕ್ರವರ್ತಿ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ 21 ದಿನಗಳ ನಿರಂತರ ಚಿಕಿತ್ಸೆ ಬಳಿಕವೂ ಚೇತರಿಸಿಕೊಂಡಿಲ್ಲ. ಕಳೆದೊಂದು ದಿನದಿಂದ ಎಸ್‌ಪಿಬಿ ಕೊರೋನಾ ಗೆದ್ದಿದ್ದಾರೆ, ಎಸ್ಪಿಗೆ ಕರೋನಾ ನೆಗೆಟಿವ್ ಬಂದಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ವು. ಆದ್ರೆ ಎಸ್‌ಪಿ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡಿಲ್ಲ. ಸದ್ಯ ಎಸ್ಪಿಗೆ ಕೊರೋನಾ ಟೆಸ್ಟ್ ಸಹ ಮಾಡಿಲ್ಲ. ನಾವು ಅವರ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿರೋದ್ರಿಂದ ಅದಕ್ಕೆ ಚಿಕಿತ್ಸೆ ನೀಡ್ತಿದ್ದೀವಿ ಎಂದು ಎಸ್ಪಿಗೆ ಚಿಕಿತ್ಸೆ ನೀಡ್ತಿರೋ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಸದ್ಯ ಚೆನ್ನೈನ ಎಂಜಿಎಂ ಆಸ್ಪತ್ರೆಯ ಎಕ್ಸ್ಕೂಸಿವ್ ಐಸಿಯು ವಾರ್ಡ್ ನಲ್ಲಿ ವೆಂಟಿಲೇಟರ್ ಅಳವಡಿಸಿ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಚಿಕಿತ್ಸೆ ನೀಡಲಾಗ್ತಿದೆ.

ಎಸ್ಪಿ ಶ್ವಾಸಕೋಶಕ್ಕೆ ಎಕ್ಮೋ ಮೆಷಿನ್ ಅಲವಡಿಸಲಾಗಿದೆ. ಕೊರೋನಾದಿಂದಾಗಿ ಶ್ವಾಸಕೋಶವು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆ ಕಳೆದ 11 ದಿನಗಳಿಂದ ಎಕ್ಮೋ ಮೆಷಿನ್ (Extracorporeal membrane oxygenation) ಅಳವಡಿಸಿ ಚಿಕಿತ್ಸೆ ನೀಡಲಾಗ್ತಿದೆ. ಈ ಎಕ್ಮೋ ಮೆಷಿನ್ ನಲ್ಲಿ ಎರಡು ವಿಧ, ಒಂದು ಶ್ವಾಸಕೋಶ ಕ್ಕೆ ಚಿಕಿತ್ಸೆ ಕೊಡುವ ಮೆಷಿನ್ ( VV ecmo, venovenous), ಎರಡನೇಯದು ಹೃದಯ ಮತ್ತು ಶ್ವಾಸಕೋಶಕ್ಕೆ ಅಳವಡಿಸುವ ಎಕ್ಮೋ ( Venoarterial (VA) ECMO), ಎಸ್ಪಿಬಿ ಅವರಿಗೆ Venovenous (VV) ECMO ಅಳವಡಿಸಿ ವೈದ್ಯರು ಚಿಕಿತ್ಸೆ ನೀಡ್ತಿದ್ದಾರೆ. ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ಎಂ. ಕರುಣಾನಿಧಿ, ಜೆ. ಜಯಲಲಿತಾರಿಗೆ ಅನಾರೋಗ್ಯ ಉಂಟಾದಾಗ ಇದೇ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಅಂತರಾಷ್ಟ್ರೀಯ ವೈದ್ಯರ ತಂಡ ಎಸ್ಪಿಬಿಯವರನ್ನು ಸೂಕ್ಷ್ಮವಾಗಿ ಮಾನಿಟರ್ ಮಾಡ್ತಿದೆ. ಇಂದು ಸಂಜೆ ವೇಳೆಗೆ ಈ ವೈದ್ಯರ ತಂಡ ಎಸ್ ಪಿ ಆರೋಗ್ಯದ ರಿಪೋರ್ಟ್ ನೀಡಲಿದ್ದಾರೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆ ವೈದ್ಯಾಧಿಕಾರಿಗಳು ಹೇಳಿದ್ದಾರೆ.