ದುಬೈ-ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಎಲ್ಲಾ ತಂಡಗಳು ಸಕಲ ರೀತಿಯಲ್ಲಿ ಸನ್ನದ್ಧವಾಗುತ್ತಿವೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಕೂಡ ತಯಾರಾಗಿ ನಿಂತಿದೆ. ಕಳೆದ ಹನ್ನೆರಡು ಆವೃತ್ತಿಗಳಲ್ಲೂ ಕಪ್ ಗೆಲ್ಲುವುದಕ್ಕೆ ಸಾಧ್ಯವಾಗದೇ ಇದ್ದರೂ, ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತೇವೆ ಅನ್ನೋ ವಿಶ್ವಾಸದಲ್ಲಿ ಕೊಹ್ಲಿ ಹುಡುಗರಿದ್ದಾರೆ.
ಅಂತರಾಷ್ಟ್ರೀಯ ಆಟಗಾರರೇ ತಂಡದ ಶಕ್ತಿ
ಎಬಿಡಿ-ಕೊಹ್ಲಿ ಜೊತೆಯಾಟದ ಮೇಲೆ ಅವಲಂಬನೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೆಚ್ಚು ಅಂತರಾಷ್ಷ್ರೀಯ ಆಟಗಾರರನ್ನು ಒಳಗೊಂಡಿದೆ.ಈ ಬಾರಿ ತಂಡಕ್ಕೆ ಆಸ್ಟ್ರೇಲಿಯಾದ ನಾಯಕ ಆರೋನ್ ಪಿಂಚ್ ಸೇರಿಕೊಂಡಿದ್ದಾರೆ. ಜೊತೆಗೆ ಮೋಯಿನ್ ಅಲಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕ್ರಿಸ್ ಮೋರಿಸ್ ರಂತಹ ಅಂತರಾಷ್ಟ್ರೀಯ ಆಟಗಾರರನ್ನು ಒಳಗೊಂಡಿದೆ.
ಇವರೆಲ್ಲ ಇದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯೂ ಕೂಡ ಕೊಹ್ಲಿ ಮತ್ತು ಎ ಬಿ ಡಿವಿಲಿಯರ್ಸ್ ಮೇಲೆಯೇ ಅವಲಂಬಿತವಾಗಿದೆ. ಇವರಿಬ್ಬರು ಪ್ರತಿ ಪಂದ್ಯದಲ್ಲೂ ಕೂಡ ತಂಡಕ್ಕೆ ಆಧಾರವಾಗಬೇಕಾದ ಅನಿವಾರ್ಯತೆಯಿದೆ.
ವಿರಾಟನಿಗೆ ಮತ್ತೊಬ್ಬ ನಾಯಕನ ಸಾಥ್
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ನಾಯಕನಾಗಿ ಶೈನ್ ಆಗಿಯೇ ಇಲ್ಲ. ಟ್ರೋಫಿ ಗೆಲ್ಲುವ ಅವಕಾಶಗಳು ಜಸ್ಟ್ ಮಿಸ್ ಆಗಿದೆ. ಆದರೆ ಈ ಬಾರಿ ನಾಯಕ ವಿರಾಟನಿಗೆ,ಆಸ್ಟ್ರೇಲಿಯಾದ ಏಕದಿನ ತಂಡದ ನಾಯಕನಾಗಿರುವ ಆರೋನ್ ಪಿಂಚ್ ಸಾಥ್ ಕೂಡ ಇದೆ. ಇದು ಎದುರಾಳಿಯ ಮೇಲೆ ಒತ್ತಡ ಹೇರುವುದಕ್ಕೆ ನೆರವಾಗಬಹುದು.

ಮಧ್ಯಮ ಕ್ರಮಾಂಕವೇ ಪ್ಲಸ್, ಅದೇ ಮೈನಸ್
ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬಿಗ್ ಚಾಲೆಂಜ್ ಇರೋದು ನಾಲ್ಕು ಐದು ಮತ್ತು ಆರನೇ ಕ್ರಮಾಂಕದಲ್ಲಿ ಆಡುವ ಆಟಗಾರ ಯಾರು ಮತ್ತು ಅವರು ಯಾವ ರೀತಿ ಪ್ರದರ್ಶನ ನೀಡ್ತಾರೆ ಅನ್ನುವುದು. ಯಾಕಂದ್ರೆ, ರಾಯಲ್ ಚಾಲೆಂಜರ್ಸ್ ಗೆ ಕ್ರಿಸ್ ಮೋರಿಸ್ ಆಲ್ ರೌಂಡರ್ ಆಗಿ ನೆರವಾಗಬಹುದು, ಮೋಯಿನ್ ಅಲಿ ಈ ಹಿಂದೆಯೂ ತಂಡದಲ್ಲಿದ್ದರೂ ಅದ್ಭುತ ಪ್ರದರ್ಶನ ನೀಡಿಲ್ಲ. ಉಳಿದಂತೆ, ಶಿವಂದುಬೆ, ವಾಷಿಂಗ್ಟನ್ ಸುಂದರ್ ಮೇಲೆ ಒತ್ತಡವೂ ಇದೆ.
ಪಾರ್ಥೀವ್ ಪಟೇಲ್ ಮತ್ತು ದೇವದತ್ ಪಡಿಕ್ಕಲ್ ಮೇಲೆ ನಂಬಿಕೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರನಾಗಿ ಪಾರ್ಥೀವ್ ಪಟೇಲ್ ಅಥವಾ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವ ಸಾಧ್ಯತೆಯಿದೆ ಇವರಿಬ್ಬರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಶೈನ್ ಆದರೆ, ಗೆಲುವು ಸುಲಭವಾಗಬಹುದು.
ಬೌಲಿಂಗ್ ನಲ್ಲಿ ಚಹಾಲ್ ಮೇಲೆ ನಂಬಿಕೆ
ಆರ್ ಸಿ ಬಿಗೆ ಕಾಡುತ್ತಿದೆ ಡೆತ್ ಬೌಲರ್ ಕೊರತೆ
ರಾಯಲ್ ಚಾಲೆಂಜರ್ಸ್ ನ ವಿಕೆಟ್ ಟೇಕಿಂಗ್ ಬೌಲರ್ ಅಂದ್ರೆ ಯಜುವೇಂದ್ರ ಚಹಾಲ್. ಚಹಾಲ್ ಈ ಹಿಂದೆಯೂ ಕೂಡ ತಂಡದ ಅಗತ್ಯಕ್ಕೆ ಅನುಗುಣವಾಗಿ ವಿಕೆಟ್ ಬೇಟೆಯಾಡಿದ್ದರು. ಆದರೇ ವೇಗದ ವಿಭಾಗದಲ್ಲಿ ಡೆತ್ ಬೌಲರ್ ಕೊರತೆ ಕಾಡುತ್ತಿದೆ.
ಅದರಲ್ಲೂ ಪ್ರಮುಖವಾಗಿ ಡೇಲ್ ಸ್ಟೇನ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದೇ ಅನುಮಾನವಾಗಿದೆ. ಇನ್ನುಳಿದಂತೆ ಉಮೇಶ್ ಯಾದವ್, ಮಹಮ್ಮದ್ ಸಿರಾಜ್ ಮತ್ತು ನವದೀವ್ ಸೈನಿ ಮೇಲೆ ತಂಡ ಅವಲಂಬಿತವಾಗಬೇಕಿದೆ. ಇವರಲ್ಲಿ ಒಬ್ಬರು ಡೆತ್ ಓವರ್ ಗಳ ಜವಾಬ್ದಾರಿವಹಿಸಿಕೊಳ್ಳಬೇಕಿದೆ. ಹೀಗಾದಲ್ಲಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ ನೆರವಾಗಬಹುದು.
ದುಬೈನಲ್ಲಿ ನಡೆಯಲಿರುವ ಐಪಿಎಲ್ ಗೆ ಎಲ್ಲಾ ತಂಡಗಳು ಸಜ್ಜಾಗಿವೆ. ಇವರ ನಡುವೆ ರಾಯಲ್ ಚಾಲೆಂಜರ್ಸ್ ಹೇಗೆ ವಿಭಿನ್ನವಾಗಿ ಪ್ಲಾನ್ ಮಾಡುತ್ತದೆ ಕಾದು ನೋಡಬೇಕು.